ಚಿತ್ತಕ್ಷೀಣತೆ -
ಮಾನವ ವ್ಯಕ್ತಿಯಲ್ಲಿ ಆಲೋಚನಾಶಕ್ತಿ, ಜ್ಞಾಪಕಶಕ್ತಿ ಮತ್ತು ಭಾವನಾಶಕ್ತಿಗಳ ಕುಗ್ಗುವಿಕೆ (ಡಿಮೆನ್‍ಷಿಯ). ಮಿದುಳಿನ ಅಂಗಾಂಶದ ನಶಿಸುವಿಕೆ ಹಾಗೂ ಅದರಲ್ಲುಂಟಾಗುವ ರಾಸಾಯನಿಕ ಮತ್ತು ರಾಚನಿಕ (ಸ್ಟ್ರಕ್ಚರಲ್) ಏರುಪೇರುಗಳೇ ಇದಕ್ಕೆ ಕಾರಣ. ಮಿದುಳಿನ ಯಾವ ಭಾಗದಲ್ಲಿ ಈ ವ್ಯತ್ಯಾಸಗಳು ಉಂಟಾಗಿವೆ ಎಂಬುದರ ಮೇಲೆ ಹಾಗೂ ರೋಗಿಯ ವಯಸ್ಸು ಮತ್ತು ಪೂರ್ವವ್ಯಕ್ತಿತ್ವ ಇವುಗಳ ಮೇಲೆ ರೋಗಲಕ್ಷಣಗಳು ಅವಲಂಬಿಸಿವೆ.

1 ಅನಿರ್ದಿಷ್ಟ ಕಾರಣಗಳು. ಇವುಗಳಲ್ಲಿ ರೋಗಲಕ್ಷಣವಾಗಿ ಮೊದಲು ಕಂಡುಬರುವುದು ಚಿತ್ತಕ್ಷೀಣತೆಯೇ.
(ಅ) ವೃದ್ಧಾಪ್ಯದ ಚಿತ್ತಕ್ಷೀಣತೆ (ಸೆನೈಲ್‍ಡಿಮೆನ್‍ಷಿಯ) : ವ್ಯಕ್ತಿಗೆ 60 ವರ್ಷ ವಯಸ್ಸಾದ ಮೇಲೆ ಬರುವ ರೋಗ. ಇದರಲ್ಲಿ ಮಿದುಳಿನ ಮುಂಭಾಗ (ಫ್ರಾಂಟಲ್ ಲೋಬ್) ಮತ್ತು ಪಾಶ್ರ್ವಭಾಗಗಳು (ಪರೈಟಲ್ ಲೋಬ್) ನಶಿಸಿರುತ್ತವೆ.
(ಆ) ವೃದ್ಧಾಪ್ಯಕ್ಕೆ ಮೊದಲೇ ಬರುವಂಥವು : (ಐ) ಆಲ್‍ಜೈಮರನ ರೋಗ. ಇದರಲ್ಲಿ ಮಿದುಳಿನ ಗಾತ್ರ ಮತ್ತು ಮಿದುಳಿನ ಗಾತ್ರ ಮತ್ತು ತೂಕ ಎರಡೂ ಕಡಿಮೆಯಾಗುತ್ತವೆ. (2) ಪಿಕ್ಸನರೋಗ : ಇದರಲ್ಲಿ ಫ್ರಾನ್‍ಟಲ್ ಮತ್ತು ಟೆಮ್‍ಪೊರಲ್ ಕಾರ್ಟೆಕ್ಸುಗಳು ಹಾನಿಗೀಡಾಗಿ ರೋಗಕ್ಕೆ ಕಾರಣವಾಗುತ್ತದೆ. (3) ಜೇಕಬ್ ಕ್ರೆಂಟ್ಸ್ ಫೆಲ್ಡ್‍ನ ರೋಗ. ಇದರಲ್ಲಿ ಸೆರಿಬ್ರಲ್ ಕಾರ್ಟೆಕ್ಸ್, ಸಬ್‍ಕಾರ್ಟಿಕಲ್ ಗ್ರೇಮಾಸಸ್, ಸೆರಿಬೆಲ್ಲಮ್ ಮತ್ತು ಬೆಯ್ನ್ ಸ್ಟೆಮ್ ನ್ಯೂರೋನ್‍ಗಳ ತೀವ್ರವಾದ ನಶಿಸುವಿಕೆ ಉಂಟಾಗುವುದರಿಂದ ರೋಗ ವ್ಯಕ್ತವಾಗುತ್ತದೆ. ಇವುಗಳಲ್ಲೆಲ್ಲ ಕಂಡುಬರುವ ಮಿದುಳಿನ ನಶಿಸುವಿಕೆಗೆ ಕಾರಣ ತಿಳಿಯದು.

2 ಕೇಂದ್ರ ನರಮಂಡಲದ ಸೋಂಕು : ಕ್ಷಯ, ಸಿಫಿಲಿಸ್, ಕ್ರಿಪ್ಟೋಕಾಕಲ್ ಮೆನಿನ್‍ಜೈಟಿಸ್ ಮತ್ತಿತರ ಮಿದುಳಿನ ಪೊರೆಗಳ ಉರಿಯೂತ, ಸಿಫಿಲಿಸ್ಸಿನಿಂದ ಸಮಸ್ತ ನರಗಳ ದೌರ್ಬಲ್ಯದಿಂದಲೂ (ಜನರಲ್ ಪೆರಾಲಿಸಿಸ್ ಆಫ್ ದಿ ಇನ್‍ಸೇನ್) ವರ್ನಿಕ್ಕನ ಎಂಕಿಫಲೊಪತಿಯಿಂದಲೂ ಚಿತ್ತ ಕ್ಷೀಣತೆ ಪರಿಣಮಿಸುತ್ತದೆ. ಎನ್‍ಕಿಫಲೈಟಿಸ್ ಮುಂತಾದ ಕಾಯಿಲೆಗಳಿಂದ ಸಂಭವಿಸುವ ನರ ಕಣಗಳ ನಷ್ಟದಿಂದಲೂ ಚಿತ್ತಕ್ಷೀಣತೆಯುಂಟಾಗುತ್ತದೆ.

3 ಪೋಷಕಾಂಶಗಳ ಕೊರತೆ : ಇವುಗಳಲ್ಲಿ ಬಿ6, ಬಿ12, ಥಯಾಮಿನ್, ನಿಕೋಟಿನಿಕ್ ಆಮ್ಲ ಮತ್ತು ಸಸಾರಜನಕಗಳ ಕೊರತೆ ಮುಖ್ಯವಾದವು.

4 ಮಾದಕವಸ್ತುಗಳ ಸೇವನೆ (ಬ್ರಾಂದಿ, ಹೆಂಡ) ಅಫೀಮು ಮತ್ತು ಭಂಗಿಯ ಚಟ, ಅಮಲಿನ ಔಷಧಗಳ ಚಟ (ಬ್ರೋಮೈಡ್ಸ್, ಬಾರ್ಬಿಟ್ಯುರೇಟ್, ಪೆಥಿಡಿನ್, ಮಾರ್ಪಿನ್ ಹೆರಾಯಿನ್ ಎಲ್ ಎಸ್ ಡಿ ಇತ್ಯಾದಿ).  

5 ಪಿತ್ತಜನಕಾಂಗ ಮತ್ತು ಪುಪ್ಪುಸಗಳ ಕಾಯಿಲೆಯಿಂದ ಉಂಟಾಗುವ ಇಂಗಾಲಾಮ್ಲದ ಅಮಲೇರಿಕೆ, ಥೈರಾಯ್ಡ್ ಅಡ್ರಿನಲ್ ಪಿಟ್ಯುಯಿಟರಿ ಗ್ರಂಥಿಗಳ ಸ್ರಾವದಲ್ಲಿ ಕೊರತೆ.
ಮೇಲಿನವೆರಡರಲ್ಲು ದೀರ್ಘಕಾಲಿಕವಾಗಿ ವಿದ್ಯುದ್ವಿಶ್ಲೇಷಕಗಳ ಮತ್ತಿತರ ವಸ್ತುಗಳ ಚಯಾಪಚಯಕ್ರಿಯೆಗಳ ಏರುಪೇರುಂಟಾಗಿ ಇವುಗಳಿಂದ ದೀರ್ಘಕಾಲಿಕ ವಿಷಮತೆಯುಂಟಾಗಿ (ಕ್ರಾನಿಕ್ ಇನ್ ಟಾಕ್ಸೀಕೇಶನ್) ಚಿತ್ತಕ್ಷೀಣತೆ ಉಂಟಾಗುತ್ತದೆ. 

6 ತಲೆಬುರುಡೆಯೊಳಗೆ ರಕ್ತದ ಹೆಪ್ಪುಗಟ್ಟುವಿಕೆ, ರಕ್ತನಾಳಗಳ ಊತ ಮತ್ತಿತರ ರೋಗಗಳು, ತಲೆಬುರುಡೆಯೊಳಗೆ ಉಂಟಾಗುವ ರಕ್ತಸ್ರಾವ.

7 ತಲೆಬುರುಡೆಯೊಳಗೆ ಗೆಡ್ಡೆ (ಟ್ಯೂಮರ್).

8 ಹುಟ್ಟಿನಿಂದಾದ ವಿಕಾರಗಳು ಮತ್ತಿತರ ಕಿರಣಗಳಿಂದ ಮಿದುಳು ಮತ್ತು ಮಿದುಳು ಬಳ್ಳಿಯ ದ್ರವಸಂಚಾರಕ್ಕೆ ತಡೆಯುಂಟಾಗುವಿಕೆ.

ಮೇಲಿನ ಮೂರು ಕಾರಣಗಳಿಂದ ತಲೆಬುರುಡೆಯೊಳಗಿನ ಒತ್ತಡ ಹೆಚ್ಚುವುದರಿಂದ ಮತ್ತಿತರ ಕಾರಣಗಳಿಂದ ಮಿದುಳಿನ ರಕ್ತಪೂರೈಕೆ ಕಡಿಮೆಯಾಗಿ ಚಿತ್ತಕ್ಷೀಣತೆ ಉಂಟಾಗುತ್ತದೆ.

9 ಮಿದುಳಿಗೆ ತಗಲುವ ಪೆಟ್ಟುಗಳು ಮತ್ತು ಅಪಸ್ಮಾರದಿಂದ (ಮೂರ್ಛೆ ರೋಗ) ಆಗುವ ರಾಚನಿಕ ನಷ್ಟದಿಂದಲೂ ಚಿತ್ತಕ್ಷೀಣತೆ ಉಂಟಾಗುತ್ತದೆ.

10 ಚಿತ್ತಕ್ಷೀಣತೆ ಇನ್ನೂ ಅನೇಕ ರೋಗಗಳಲ್ಲೂ ಪ್ರಧಾನಲಕ್ಷಣವಾಗಿ ಕಾಣಿಸಬಹುದು. ಒಟ್ಟಿನಲ್ಲಿ ಚಿತ್ತಕ್ಷೀಣತೆಗೆ ಒಳಗಾದ ರೋಗಿಗಳಲ್ಲಿ ಎರಡು ಬಗೆಯನ್ನು ಕಾಣಬಹುದು : (ಅ) ನರಮಂಡಲಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಾಥಮಿಕ ತೊಂದರೆ ಇಲ್ಲದೆಯೇ ಚಿತ್ತಕ್ಷೀಣತೆಗೆ ಒಳಗಾದವರು; (ಆ) ನರಮಂಡಲದ ವಿವಿಧ ಭಾಗಗಳಿಗೆ ತೊಂದರೆ ಉಂಟಾಗಿ ಚಿತ್ತಕ್ಷೀಣತೆಗೆ ಒಳಗಾದವರು.

ಚಿತ್ತಕ್ಷೀಣತೆಯ ಲಕ್ಷಣಗಳು : ಚಿತ್ತಕ್ಷೀಣತೆ ಉಂಟಾದ ರೋಗಿಗಳ ಕೆಲಸ ಕಾರ್ಯಗಳಲ್ಲಿ ಮೊದಲಿನ ಚಟುವಟಿಕೆ ಇರುವುದಿಲ್ಲ. ಸುತ್ತಮುತ್ತಲಿನವರು ಅವರ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಾಣಬಹುದು. ತಮಗೆ ಈಚೆಗೆ ಮರೆವು ಜಾಸ್ತಿ ಆಗಿದೆಯೆಂದು ಇಂಥ ರೋಗಿಗಳು ಹೇಳುತ್ತಾರೆ. ಸಾಮಾನ್ಯವಾಗಿ ಪಾಶ್ರ್ವವಾಯು, ವಾಕ್ ಶಕ್ತಿನಾಶ, ದೇಹಾರ್ಧಸಂವೇದನೆಯ ನಾಶ, ಅಪಸ್ಮಾರ ಮುಂತಾದವು ಚಿತ್ತಕ್ಷೀಣತೆಯ ಜೊತೆಯಲ್ಲಿ ಕಾಣಿಸಿಕೊಂಡು ರೋಗಲಕ್ಷಣಗಳಲ್ಲಿ ಸ್ಪಷ್ಟ ಬದಲಾವಣೆಗಳನ್ನು ಉಂಟುಮಾಡುತ್ತವೆ. ರೋಗಿಗಳ ಸಾಮಾನ್ಯ ಆರೋಗ್ಯ ಮನಃಸ್ಥಿತಿ ಮೊದಲಾದುವುಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ರೋಗಿ ಪೂರ್ಣವಾಗಿ ಜಾಗರೂಕನಾಗಿರಬಹುದಾದರೂ ಯಾವುದಾದರೂ ವಿಷಯ ಅಥವಾ ವಸ್ತುವಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ತನ್ನ ಸ್ಥಿತಿ ಮತ್ತು ತನ್ನ ಸುತ್ತಮುತ್ತಲ ಆವರಣದ ಅರಿವು ಸ್ಪಷ್ಟವಾಗಿರುವುದಿಲ್ಲ. ವಿವೇಚನಾಶಕ್ತಿ, ಜ್ಞಾಪಕಶಕ್ತಿಗಳು ಕಡಿಮೆಯಾಗಿರುವುದರಿಂದ ನಿತ್ಯವ್ಯವಹಾರದಲ್ಲಿ ಬದಲಾವಣೆ ಉಂಟಾಗಿ ಸಂಶಯ, ಕೋಪ, ಭಯ, ಭ್ರಾಂತಿ ಕ್ಲೇಶಗಳಿಂದ ಆತನ ನಡವಳಿಕೆ, ಮಾತುಕಥೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಭಾವನಾಪರವಶತೆ ಕಡಿಮೆ ಆಗಿರುವುದರಿಂದ ತನಗೆ ಪ್ರಿಯರಾದವರು ಸತ್ತರೂ ದುಃಖಪಡದೆ ಇರಬಹುದು. ನಿತ್ಯದ ವೇಷಭೂಷಣ ಶುಚಿತ್ವದ ಕಡೆಗೆ ಗಮನ ಕಡಿಮೆಯಾಗಿ ಮಲಮೂತ್ರಗಳ ಅರಿವೂ ಇಲ್ಲದಂತಾಗಬಹುದು. ರೋಗಿ ತನ್ನ ಸಂಸ್ಕøತಿಗೆ ವಿರೋಧವಾದ ಕೆಲಸಗಳನ್ನೂ ಮಾಡಬಹುದು. ವ್ಯಕ್ತಿಯ ಮಿದುಳಿನ ಬಹುಭಾಗಕ್ಕೆ ಹಾನಿ ಉಂಟಾಗಿರಬಹುದಾದ್ದರಿಂದ ದೇಹದ ಚಲನಾತ್ಮಕ ಮತ್ತು ಪ್ರತಿವರ್ತನಾತ್ಮಕ (ರಿಫ್ಲೆಕ್ಸಿವ್) ಚಟುವಟಿಕೆಗಳಲ್ಲಿ ಏರಿಳಿತಗಳಾಗುತ್ತವೆ. ವೃದ್ಧಾಪ್ಯದ ಚಿತ್ತಕ್ಷೀಣತೆಯ ಪ್ರಾರಂಭ ನಿಧಾನವಾಗಿದ್ದು ಶಾರೀರಕ ಮತ್ತು ಮಾನಸಿಕ ಒತ್ತಡಗಳ ಪರಿಣಾಮದಿಂದ ಅದು ಹೆಚ್ಚುತ್ತ ಹೋಗುತ್ತದೆ. ಆರಂಭದ ದೆಸೆಯಲ್ಲಿ ಮರೆವು, ತಾತ್ಕಾಲಿಕ ಮಾನಸಿಕಗೊಂದಲ, ತಪ್ಪುನಿರ್ಣಯ ಮೊದಲಾದವು ತಲೆದೋರುತ್ತವೆ. ಈ ಚಿಹ್ನೆಗಳು ಕ್ರಮೇಣ ಉಲ್ಬಣವಾಗಿ ತೀರ ಹತ್ತಿರದ ಘಟನೆಗಳ ಮರೆವು ಜಾಸ್ತಿಯಾಗುತ್ತದೆ. ಈ ಬಗೆಯ ವ್ಯಕ್ತಿಗಳಲ್ಲಿ ಬಹಳ ಮಂದಿಗೆ ಅಸ್ಥಿರ ನಡಿಗೆ, ನಡುಕ, ಕ್ಷೀಣಧ್ವನಿ. ಮಂದಚಲನೆ ಮುಂತಾದ ಚಲನೆಗೆ ಸಂಬಂಧಪಟ್ಟ ಏರುಪೇರುಗಳು ಕಂಡುಬರುತ್ತವೆ. ಅಂತ್ಯದಲ್ಲಿ ರೋಗಿ ಹಾಸಿಗೆ ಹಿಡಿದು ಚಲಿಸಲಾಗದಿರುವುದರಿಂದ ದೇಹದಲ್ಲಿ ನಾನಾ ತೊಡಕುಗಳು ಉಂಟಾಗಿ ಅವನು ಮರಣವನ್ನಪ್ಪುತ್ತಾನೆ. ಆಲ್ ಜೈಮರಿನ ರೋಗ ಸುಮಾರು 40ರಿಂದ 70 ವಯಸ್ಸಿನಲ್ಲಿರುವವರಲ್ಲಿ ಕಂಡುಬರುತ್ತದೆ. ಇದರಲ್ಲೂ ವೃದ್ಧಾಪ್ಯದ ಚಿತ್ತಕ್ಷೀಣತೆಯ ಲಕ್ಷಣಗಳೇ ಕಂಡುಬರುವುವಲ್ಲದೆ ಮೂರ್ಛೆ, ದಿಗ್ಭ್ರಮೆ, ತೊದಲು ಇತ್ಯಾದಿಗಳೂ ಕಂಡುಬರಬಹುದು. ಪಿಕ್ಸನರೋಗ 50-60 ವರ್ಷ ವಯಸ್ಸಿನವರಲ್ಲಿ ಕಂಡುಬರುತ್ತದೆ. ಹೆಂಗಸರಲ್ಲಿ ಹೆಚ್ಚು. ಮೇಲಿನ ಮೂರು ರೀತಿಯ ಚಿತ್ತಕ್ಷೀಣತೆಗಳೂ ವಂಶಪಾರಂಪರ್ಯವಾಗಿರಬಹುದು. ಜೇಕಬ್ ಕ್ರೆಂಟ್ಸ್ ಫೆಲ್ಡನ ರೋಗ ಮಧ್ಯ ವಯಸ್ಕರಲ್ಲಿ ಕಂಡುಬರುತ್ತದೆ. ಇದು ವಂಶಪಾರಂಪರ್ಯವಲ್ಲದ ಮತ್ತು ವಿರಳವಾಗಿ ಕಂಡುಬರುವ ರೋಗ. ತೀವ್ರವಾದ ಚಿತ್ತಕ್ಷೀಣತೆ ಹಾಗೂ ಅಪಸ್ಮಾರದಿಂದ ರೋಗಿ ಒಂದೆರಡು ತಿಂಗಳಲ್ಲೇ ಸತ್ತುಹೊಗುತ್ತಾನೆ.
ಚಿತ್ತಕ್ಷೀಣತೆಯ ಪತ್ತೆ : ಚಿತ್ತಕ್ಷೀಣತೆಯನ್ನು ಪತ್ತೆಹಚ್ಚಲು ರೋಗಿಯ ಮುಂಚಿನ ಬೌದ್ಧಿಕಮಟ್ಟಕ್ಕೆ ಅನುಗುಣವಾದ ಕೆಲವು ಪರೀಕ್ಷೆಗಳನ್ನು-ಲೆಕ್ಕಮಾಡುವುದು, ಜ್ಞಾಪಕಶಕ್ತಿಯನ್ನು ಪರೀಕ್ಷಿಸುವುದು ಮುಂತಾದವು - ಮಾಡಬೇಕಾಗುತ್ತದೆ. ಇದರ ಜೊತೆಗೆ ಕೆಲವು ಪ್ರಾಯೋಗಿಕ ಪರೀಕ್ಷೆಗಳನ್ನೂ ಕೈಗೊಳ್ಳಬೇಕಾಗುತ್ತದೆ. (ಅ) ರಕ್ತದಲ್ಲಿ ಬ್ರೋಮೈಡುಗಳು, ಬಾರ್ಬಿಟ್ಯುರೇಟುಗಳು ಮತ್ತು ಥೈರಾಯ್ಡ್ ರಸಗಳ ಮಟ್ಟವನ್ನು ಪರೀಕ್ಷಿಸುವುದು. (ಆ) ಎದೆ ಮತ್ತು ತಲೆಬುರುಡೆಗಳ ಎಕ್ಸ್ ಕಿರಣ ಪರೀಕ್ಷೆಯಿಂದ ಇರಬಹುದಾದ ಸೋಂಕು ಗಂಟು ಮತ್ತು ನ್ಯೂನತೆ ವಿಕಲತೆಗಳನ್ನು ಪತ್ತೆಹಚ್ಚುವುದು. (ಇ) ಮಿದುಳು ಮತ್ತು ಮಿದುಳುಬಳ್ಳಿಯ ದ್ರವದ ಒತ್ತಡ ಬಣ್ಣ ಸಸಾರಜನಕಾಂಶ ಮತ್ತು ಜೀವಕೋಶಗಳನ್ನು ಪರೀಕ್ಷಿಸುವುದರಿಂದ ಮಿದುಳಿಗೆ ತಗುಲಿರಬಹುದಾದ ಸೋಂಕು, ಪೆಟ್ಟು ಅಥವಾ ಗೆಡ್ಡೆಗಳನ್ನು ಗುರುತಿಸುವುದು. (ಈ) ಮಿದುಳಿನ ವಿದ್ಯುನ್ನಿರೂಪಣಯಂತ್ರದಿಂದ (ಎಲೆಕ್ಟ್ರೋ ಎನ್ ಸಫಲೋಗ್ರಾಮ್) ಅಪಸ್ಮಾರ, ಮಿದುಳಿನ ಗೆಡ್ಡೆ ಔಷಧಗಳ ಅಮಲೇರಿಕೆಯ ಪ್ರಸಂಗಗಳನ್ನು ಅರಿಯುವುದು. ಇವಲ್ಲದೆ ಚಿತ್ತಕ್ಷೀಣತೆಯ ಸ್ವರೂಪಕ್ಕೆ ಅನುಗುಣವಾಗಿ ಇನ್ನೂ ಅನೇಕ ವಿಧವಾದ ರೋಗಪರೀಕ್ಷಾವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಚಿತ್ತಕ್ಷೀಣತೆಯ ಚಿಕಿತ್ಸೆ : ಚಿಕಿತ್ಸೆಯ ಸ್ವರೂಪ ಚಿತ್ತಕ್ಷೀಣತೆಯ ಕಾರಣವನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟವಾದ ಯಾವ ಚಿಕಿತ್ಸೆಯೂ ಇಲ್ಲ. ಚಯಾಪಚಯ ವೈಷಮ್ಯ ನ್ಯೂನತೆಗಳು ಅಥವಾ ಪುನಶ್ಚೇತನಗೊಳಿಸಬಹುದಾದ ಮಿದುಳಿನ ಪೆಟ್ಟುಗಳು-ಇವನ್ನು ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಬಹುದು. ಮಿದುಳಿನ ನಶಿಸುವಿಕೆಯಿಂದ ಉಂಟಾದ ಚಿತ್ತಕ್ಷೀಣತೆಗೆ ಇಂಥ ಚಿಕಿತ್ಸೆ ಸಾಧ್ಯವಿಲ್ಲ. ರೋಗಿಯನ್ನು ಪೂರ್ವಪರಿಚಿತ ವಾತಾವರಣದಲ್ಲಿಯೇ ಇಟ್ಟು, ನುರಿತ ದಾದಿಯರ ಸೇವೆಯನ್ನು ನಿರಂತರವಾಗಿ ಒದಗಿಸಿ ಚೆನ್ನಾಗಿ ಪೋಷಿಸಬೇಕು. ಸಣ್ಣಪುಟ್ಟ ಸೋಂಕು ತಲೆದೋರಿದಲ್ಲಿ ತಕ್ಕ ಸೋಂಕು ನಿರೋಧಕಗಳನ್ನು ನೋವು ಶಾಮಕಗಳನ್ನು ಕೊಡಬೇಕು.								(ಜೆ.ಇ.ಸಿ.ಎಚ್.; ಜಿ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ